ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ಅವನ ಕೀರ್ತನೆ.
ಭಗವಂತ ತನ್ನ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಾನೆ
1. ಕರ್ತನೇ, ನನ್ನನ್ನು ಕಳವಳಪಡಿಸುವವರು ಹೆಚ್ಚಿದ್ದಾರೆ! ನನಗೆ ವಿರೋಧವಾಗಿ ಏಳುವವರು ಅನೇಕರು.
2. ದೇವರಲ್ಲಿ ಇವನಿಗೆ ಯಾವ ಸಹಾಯವೂ ಇಲ್ಲವೆಂದು ನನ್ನ ವಿಷಯದಲ್ಲಿ ಅನೇಕರು ಹೇಳುತ್ತಾರೆ. ಸೆಲಾ.
3. ಆದರೆ ಓ ನನ್ನ ಕರ್ತನೇ, ನನಗೆ ಗುರಾಣಿಯೂ ನನ್ನ ಘನವೂ ನನ್ನ ತಲೆ ಎತ್ತುವವನೂ ನೀನೇ.
4. ನನ್ನ ಧ್ವನಿಯೆತ್ತಿ ಕರ್ತನಿಗೆ ಮೊರೆಯಿಟ್ಟೆನು; ಆತನು ತನ್ನ ಪರಿಶುದ್ಧ ಪರ್ವತದಿಂದ ನನ್ನ ಮೊರೆಯನ್ನು ಕೇಳಿದನು. ಸೆಲಾ.
5. ಕರ್ತನೇ ನನ್ನನ್ನು ಕಾಪಾಡಿದ್ದರಿಂದ ನಾನು ಮಲಗಿ ನಿದ್ದೆಗೈದು ಎಚ್ಚತ್ತೆನು.
6. ನನಗೆ ವಿರೋಧವಾಗಿ ಸುತ್ತಲೂ ಮುತ್ತಿದ ಹತ್ತು ಸಾವಿರ ಜನರಿಗೆ ಭಯಪಡೆನು.
7. ಓ ಕರ್ತನೇ, ಏಳು; ಓ ನನ್ನ ದೇವರೇ, ನನ್ನನ್ನು ರಕ್ಷಿಸು. ನೀನು ನನ್ನ ಶತ್ರುಗಳೆಲ್ಲರ ದವಡೆಯ ಮೇಲೆ ಹೊಡೆದು ಭಕ್ತಿಹೀನರ ಹಲ್ಲುಗಳನ್ನು ಮುರಿದಿದ್ದೀ.
8. ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು. ಸೆಲಾ.